ತ್ರಿಭುವನ ತಾತ

ಕನ್ನಡದಲ್ಲಿ ಕೆಲವು ರಗಳೆಗಳನ್ನು ಬರೆದಿರುವ ಕವಿ. ಸುಮಾರು 1165 ರಲ್ಲಿದ್ದಂತೆ ತಿಳಿದು ಬರುತ್ತದೆ. ಸ್ಥಳ ಆಂಧ್ರಪ್ರದೇಶ. ಜಾತಿಯಲ್ಲಿ ವೈಷ್ಣವ ಬ್ರಾಹ್ಮಣ. ಈ ಕವಿಯ ವಿಚಾರವಾಗಿ ಪದ್ಮಣಾಂಕ (ಸು.1385) ಪದ್ಮರಾಜಪುರಾಣದಲ್ಲಿ ತನ್ನ ವಂಶಸ್ಥನಾದ ಕೆರೆಯ ಪದ್ಮರಸನ ಮಹಿಮೆಯನ್ನು ಹೊಗಳುವಾಗ ಪ್ರಸ್ತಾಪಿಸಿದ್ದಾನೆ.

ತ್ರಿಭುವನ ತಾತ `ಕೇಶವಂಗಧಿಕ ದೈವವಿಲ್ಲಾ ವೈಷ್ಣವವ ಶಾಶ್ವತಂ ಇನಿತರ್ಕೆ ಸಂದೇಹವಿಲ್ಲ ಎಂದು ಹೋದ ಕಡೆಯಲ್ಲೆಲ್ಲ ಸಾರುತ್ತ ಕಡೆಗೆ ಕರ್ನಾಟಕಕ್ಕೆ ಬಂದು ದೋರಸಮುದ್ರದ ರಾಜ ನರಸಿಂಹ ಬಲ್ಲಾಳನನ್ನು ಕಂಡ. ಬಲ್ಲಾಳನ ಮಂತ್ರಿ ಕೆರೆಯ ಪದ್ಮರಸನಿಗೂ ತಾತನಿಗೂ ನಡೆದ ವಾದದಲ್ಲಿ ಪದ್ಮರಸ ಗೆದ್ದು ಶಿವಪಾರಮ್ಯವನ್ನು ಸ್ಥಾಪಿಸಿದ. ಮೊದಲು ಮಾಡಿಕೊಂಡ ಕರಾರಿನಂತೆ ತ್ರಿಭುವನ ತಾತ ಪದ್ಮರಸನಿಗೆ ಶಿಷ್ಯನಾಗಿ ವೀರಶೈವ ಮತವನ್ನು ಸ್ವೀಕರಿಸಿದ.

ಪದ್ಮರಾಜ ಪುರಾಣದಲ್ಲಿ ಬರುವ ಈ ವಿಷಯವನ್ನು ಕೆರೆಯ ಪದ್ಮರಸನ ಮಗನಾದ ಪದ್ಮರಸ (ಸು.1180) ತನ್ನ ಕೃತಿಯಾದ ಸಾನಂದಚರಿತೆಯ ಕಥಾಗರ್ಭ ಸಂಧಿಯಲ್ಲೂ ಮುಂದೆ ದೋರಾಂಬುಧಿಯ ರಾಮಣ್ಣ, ಹಂಪೆಯ ರಾಘವಾಂಕ. ಹುಲಿಗೆರೆಯ ಮಾಯಿದೇವ, ಗುರುಬಕ್ತ ಕಾಮಣ್ಣ, ದೇವರಸ, ಮೊದಲಾದ ಶಿವಶರಣರೂ ಪುಷ್ಟೀಕರಿಸಿದ್ದಾರೆ.

ತ್ರಿಭುವನ ತಾತ ಲಲಿತ ರಗಳೆಯಲ್ಲಿ ಬರೆದಿರುವ ಗುರುರಗಳೆ ಗುರುವಿನ ಮಹಿಮೆಯನ್ನು ಕೊಂಡಾಡುತ್ತದೆ. ಗುರುಶರಣು ಎಂಬುದಾಗಿ ಪ್ರತಿಪಂಕ್ತಿಯಲ್ಲಿಯೂ ಅಂತ್ಯಗೊಳ್ಳುವ ಈ ರಗಳೆಗೆ ಆದಿ ಅಂತ್ಯಗಳಲ್ಲಿ ಬರುವ ಕಂದಗಳು ಗುರು ವಿಶ್ವೇಶ ಎಂಬ ಅಂಕಿತದಿಂದೊಡಗೂಡಿವೆ. ಈ ರಗಳೆಗೆ ಶಾಂತಮಲ್ಲ (ಸು.1650) ಒಂದು ಟೀಕೆ ಬರೆದಿದ್ದಾನೆ. ಮಹಾದೇವ ಎಂದು ಮುಗಿಯುವ ಉತ್ಸಾಹಛಂದಸ್ಸಿನಲ್ಲಿರುವ ಮಹಾದೇವ ರಗಳೆ ಶಿವನ ಪಾರಮ್ಯವನ್ನು ಹೊಗಳುತ್ತದೆ. ಇದರಲ್ಲಿ ತಿರುನೀಲಕಂಠ ಗುಂಡುಬೊಮ್ಮಯ್ಯ, ಸಿರಿಯಾಳ ಚೋಳಿಯಕ್ಕ ಮೊದಲಾದ ಶಿವಶರಣರನ್ನು ಹೆಸರಿಸಿದೆ. ಈ ರಗಳೆಯ ಅಂತ್ಯದಲ್ಲಿರುವ ಕಂದ ಪದ್ಯದಲ್ಲಿಯೂ ಗುರು ವಿಶ್ವೇಶ ಎಂಬ ಅಂಕಿತ ದೊರಕುತ್ತದೆ. ಇದೇ ರೀತಿಯ ಅಂಕಿತ ಅಮ್ಮವ್ವೆಯ ರಗಳೆ, ಪಗಲ್ಚೋಳನ ರಗಳೆ, ಚೋಳಿಯಕ್ಕನ ರಗಳೆಗಳಲ್ಲಿ ಉಕ್ತವಾಗಿರುವುದರಿಂದ ಈ ರಗಳೆಗಳೆ ಕರ್ತೃವೂ ತ್ರಿಭುವನ ತಾತನೇ ಎಂಬುದು ಸ್ಪಷ್ಟ.
.
ತ್ರಿಭುವನ ತಾತನ ಗುರು ಕೆರೆಯ ಪದ್ಮರಸನ ಇಷ್ಟದೈವ ವಿಶ್ವೇಶ ; ಶಿಷ್ಯನ ಇಷ್ಟದೈವ ಹಾಗೂ ಅಂಕಿತ ಗುರು ವಿಶ್ವೇಶ.
(ಕೆ.ಆರ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ